Monday, 18 August 2014

ಉಳಿಮೆ ಅಳಿಮೆಗಳ ಗೊಜಲಿನಲ್ಲಿ!

     ಹಲವು ದಿನಗಳಿಂದ ನನ್ನ ಮನದಾಳದಲ್ಲಿ ಕ್ಷೀಣವಾಗಿ ಕೊರೆಯುತ್ತಿದ್ದ ಗೊಂದಲ ಇವತ್ತು ಧುತ್ ಎಂದು ಪುಟಿದೇಳಿತು. ನನ್ನ ಗೆಳೆಯ ಶಶಿಯೊಂದಿಗೆ ಮಾತನಾಡುತ್ತಿದ್ದಾಗ, "ಕನ್ನಡ ಉಳಿಸುವ, ಬೆಳೆಸುವ" ವಿಷಯ ಬಂತು. "ಕನ್ನಡ ಭಾಷೆಯ ಅಗತ್ಯವೇನು?ಇವತ್ತಿನ ಆರ್ಥಿಕತೆಗೆ ಎಳ್ಳಷ್ಟೂ ಪ್ರಯೋಜನಬಾರದ ಕನ್ನಡ ಭಾಷೆಯತ್ತ ನಾವು ಎಷ್ಟು ಗಮನನೀಡಬೇಕು? ಇಲ್ಲ, ನಮ್ಮ ಅಭಿಮಾನದಿಂದಾಗಿ ಕನ್ನಡವನ್ನು ಬದುಕಿನ ಎಲ್ಲಾ ಆಯಾಮಗಳಲ್ಲಿ ಆವಿಷ್ಕರಿಸುವ ದಾರಿಯನ್ನು ಕೊರೆಯಬೇಕೆ?" ಹೀಗೆ ಅವಲೋಕಿಸುತ್ತಿದ್ದಾಗ, ಸಾಕಷ್ಟು ವಿಚಾರಗಳು ತೇಲಿಬಂದು, ಮನತಾಕಿಸಿ, ತರುಚಿ ಮಾಯವಾದವು. ಚರ್ಚೆಯ ಅಂತ್ಯದಲ್ಲಿ ನಾವು ತಾಳಿದ ನಿಲುವಿಗೆ ಮಾರ್ಗಸೂಚಿಯಾದ ಆ ವಿಚಾರಗಳಲ್ಲಿ ಮುಖ್ಯವಾದದ್ದು, "ಕನ್ನಡದ ಶಕ್ತಿಯೇನು?ನ್ಯೂನತೆಯೇನು?" ಎಂಬುದು. ಇಲ್ಲಿ ಕನ್ನಡವೆಂದಾಗ ನಾನು, ಬರಿಯ ಭಾಷೆಯನ್ನಷ್ಟೆ ಸಂಭೋಧಿಸದೆ ಇಡಿಯ ಕನ್ನಡ ಜನಪದವನ್ನು ಉದ್ಧೇಶಿಸುತ್ತಿದ್ದೇನೆ.  

     ನನ್ನ ಪ್ರಕಾರ, ಜಗತ್ತಿನ ಯಾವುದೇ ಭಾಷೆಗಿರುವ ಬೆಳವಣಿಗೆ ಮಾರ್ಗಗಳು ಮೂರು. ರಾಜಕೀಯ, ಜಾನಪದ ಹಾಗೂ ಸ್ಪಂದನ. ರಾಜಕೀಯ ಮಾರ್ಗವು, ನಿರ್ಧಿಷ್ಟ ನುಡಿಪ್ರಧಾನ ಆಳ್ವಿಕೆಯ ಆಳ ಮತ್ತು ವಿಸ್ತಾರವನ್ನು ಅರಸುತ್ತದೆ. ಜಾನಪದವು, ನುಡಿಜಗತ್ತಿನ ಪುಟ್ಟ ಪುಟ್ಟ ಬುಡಕಟ್ಟುಗಳ ಸಂಕೀರ್ಣ ಸಂವೇದನೆಯ ಸ್ವರೂಪವನ್ನು ಪಸರುತ್ತದೆ. ಸ್ಪಂದನವು, ದೇಶಕಾಲದ, ಎಲ್ಲಾ ಪ್ರಮುಖ ಆಗುಹೋಗುಗಳನ್ನು, ಪ್ರಜ್ಞಪಲ್ಲಟಗಳನ್ನು ಹೀರಿ, ಹೊಸಬಗೆಯಲ್ಲಿ ತನ್ನ ನುಡಿಗಟ್ಟಿನಲ್ಲಿ ಪ್ರಸವಿಸುತ್ತದೆ.

       ಕನ್ನಡಕ್ಕೆ ಬರುವುದಾದರೆ, ತನ್ನ ಎರಡು ಸಾವಿರ ವರುಷಕ್ಕೂ ಮಿಕ್ಕ ಆಗಿರುವಿಕೆಯಲ್ಲಿ (ಇತಿಹಾಸದಲ್ಲಿ), ಎಂದಿಗೂ ಈ ನುಡಿಯು ರಾಜಕೀಯದಲ್ಲಿ ಪ್ರಾಬಲ್ಯ ಮೆರೆಯಲಿಲ್ಲ. ಕದಂಬ, ರಾಷ್ಟ್ರಕೂಟ, ಬಾದಾಮಿ ಚಾಲುಕ್ಯರ ಕಾಲದ ಆಳ್ವಿಕೆಯಲ್ಲಿ ಕನ್ನಡಕ್ಕೆ ಹಿರಿಮೆ ದೊರೆತಿದ್ದರೂ, ಇದೊಂದೇ ಪ್ರಧಾನ ಭಾಷೆಯಾಗಿ ಪೋಷಿಸಲ್ಪಡಲಿಲ್ಲ. ಕನ್ನಡದ ರಾಜರು ಕನ್ನಡದಷ್ಟೇ ಅಥವಾ ಮಿಗಿಲಾಗಿ, ಸಂಸ್ಕೃತ, ಪ್ರಾಕೃತ ಭಾಷೆಗಳಿಗೆ, ತದನಂತರ ಆಳಿದವರು ಉರ್ದು, ಪರ್ಷಿಯನ್ ಭಾಷೆಗಳಿಗೆ ಪ್ರಾಧಾನ್ಯತೆ ನೀಡಿದರು. ಇನ್ನು ಇಂತಾ ರಾಜರ ಆಳ್ವಿಕೆಯೂ, ಹೆಚ್ಚು ಕಾಲ ಉಳಿಯದೆ, ಉಳಿದ ಅರಸರ ಸೀಮೆಯು ಗಣನೀಯವಾಗಿ ಕುಗ್ಗುತ್ತಾ, ನುಡಿಯಾಶ್ರಯದ ಗಟ್ಟಿತನವೂ ಕುಗ್ಗಿತು. ಸ್ವಾತಂತ್ರೋತ್ತರ ಕಾಲದಲ್ಲೂ, ಗೋಕಾಕ್ ಚಳವಳಿ ಬಿಟ್ಟರೆ, ಕನ್ನಡ ಸಮಸ್ತ ಲೋಕವನ್ನು, ರಾಜಕೀಯವಾಗಿ ಯಾವ ವಿಷಯವೂ ಉದ್ದೀಪಿಸಿಲ್ಲ. ಈಗಿನ ಕನ್ನಡಮಾನಸವು ಇದರ ಅಗತ್ಯವೇ ಬೇಡವೆಂಬಂತೆ, ವಿಶ್ವರಾಜಕೀಯದ ಗೋಜಲುಗಳಲ್ಲಿ ಗಣನೀಯವಾಗಿ ಕರಗಿದೆ. ಇವೆಲ್ಲದರ ಹಿನ್ನೆಲೆಯಲ್ಲಿ ಅರ್ಥೈಸುವುದಾದರೆ, ಕನ್ನಡಕ್ಕೆ ಪ್ರಬುದ್ಧ ರಾಜಕೀಯ ಶಕ್ತಿಯೇ ಇಲ್ಲವೆನ್ನಬೇಕು. ಅಗತ್ಯವೂ ಇಲ್ಲವೆನ್ನಬೇಕು.

      ಇನ್ನು ಸ್ಪಂದನಕ್ಕೆ ಬರುವುದಾದರೆ, ಸುಮಾರು ಕ್ರಿ.ಶ.೧೬ನೇ ಶತಮಾನದವರೆಗೂ ಜಾಗೃತವಾಗಿದ್ದ ನುಡಿಸಂವೇದನೆ, ತದನಂತರ ಹೇಳುಹೆಸರಿಲ್ಲದಂತೆ ನಶಿಸಿತು. ೨೦ನೇ ಶತಮಾನದ ಆದಿಯಲ್ಲಿ ಈ ಪ್ರಜ್ಞೆಯು ಮರುಹುಟ್ಟು ಪಡೆದರೂ, ಇದು ಒಂದು ಮಹತ್ತರವಾದ ಮಜಲನ್ನು ಕಡೆಗಣಿಸಿತು. ಅದು, ವಿಜ್ಞಾನ. ೨೧ನೇ ಶತಮಾನದ ನುಡಿಶಕ್ತಿಕೇಂದ್ರಗಳಾಗಿರುವ  ಅರಿಮೆ ಹಾಗೂ ಚಳಕಸೀಮೆಯಲ್ಲಿ, ಕನ್ನಡದ ಉಳಿಮೆಯಾಗಲೇ ಇಲ್ಲ. ಇದು ಎಲ್ಲ ಭಾರತೀಯ ಭಾಷೆಗಳಿಗೂ ಅನ್ವಯಿಸುವಂತದ್ದು. ಕನ್ನಡದಲ್ಲೇ ವೈಜ್ಞಾನಿಕ ತತ್ವರಚನೆ, ಸಿದ್ಧಾಂತ ಮಂಡನೆ, ಸಂಶೋಧನೆ, ಪ್ರಯೋಗಗಳು ಇವ್ಯಾವುವೂ ನಡೆಯಲಿಲ್ಲ. ಈಗ, ಈ ಜಾಗವನ್ನು ಇಂಗ್ಲೀಷು ಸಂಪೂರ್ಣವಾಗಿ ಆವರಿಸಿಬಿಟ್ಟಿದೆ. ಕನ್ನಡದ ಸರ್ವಾಂಗಿಕ  ಬೆಳಮೆಯಲ್ಲಿ ಈ ಜಾಗದ ಬಳಕೆ ಅವಶ್ಯಕವಾಗಿದ್ದರೂ, ಈಗ ಪರಿಸ್ಥಿತಿ ಕೈಮೀರಿದೆ. ಈ ಬದಲಾವಣೆಗೆ ಕೈಹಾಕುವುದು ವ್ಯರ್ಥ ದುಡಿಮೆಯಾದೀತು.

      ಈ ನಿಟ್ಟಿನಲ್ಲಿ, ಕನ್ನಡದ ನ್ಯೂನತೆ, ದುರ್ಬಲ ರಾಜಕೀಯ ಶಕ್ತಿ ಹಾಗೂ ಸೀಮಿತ ಸ್ಪಂದನವಲಯಗಳೆಂದು ನಿರ್ವಿವಾದದಿಂದ ಒಸರಬಹುದು. ಇನ್ನು, ಕನ್ನಡ ಜಾನಪದ? ಇದೂ ಮೇಲೆರಡರಂತೆ ದುರ್ಬಲವೇ?

        ಶತಶತಮಾನಗಳಿಂದ, ಆಳ್ವಿಕರ ಹಂಗುಗಳಿಂದ ಹೊರತಾಗಿ, ಸಮಕಾಲೀನ ನೆರೆಯ ಜಾನಪದಗಳ ಮಿಳಿತಗಳಿಂದಲೂ ಅಭಾದಿತವಾಗಿ, ಗಟ್ಟಿಯಾಗಿ ಬೆಳೆದದ್ದು ಕನ್ನಡದಲ್ಲಿ, ಕನ್ನಡ ಜಾನಪದ ಮಾತ್ರ. ಆದಿಕವಿ ಪಂಪರಂತಹವರು ಈ ಜಾನಪದದ ಒಂದು ತುದಿಯಾದರೆ, ಯಕ್ಷಗಾನ, ದೊಡ್ಡಾಟಗಳಂತಹ ಪ್ರದರ್ಶನ ಕಲೆಗಳು ಮತ್ತೊಂದು ತುದಿ. ಅರಸು ನೃಪತುಂಗನ "ಕವಿರಾಜಮಾರ್ಗ"ದಲ್ಲಿ ಹೇಳಿರುವ ಹಾಗೆ ಕನ್ನಡನಾಡಿನ ಜನ "ಚದುರರ್ ನಿಜದಿಂ ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತಮತಿಗಳ್"! ಎಂದರೆ ಕುಳಿತು ಓದದೆಯೂ, ಪಂಡಿತನಲ್ಲದೆಯೂ ಕಾವ್ಯಪ್ರಯೋಗಳಲ್ಲಿ ಪರಿಣತಿಯನ್ನು ಹೊಂದಿದ್ದಾರೆ ನಮ್ಮ ಕನ್ನಡ ಜನರು! ಕನ್ನಡ ನುಡಿವಿನ್ಯಾಸವೂ ಸಾಹಿತ್ಯಿಕ ಅಭಿವ್ಯಕ್ತಿಗೆ ಅನುಗುಣವಾಗಿದೆಯಂತೆ! ೨೦ನೇ ಶತಮಾನದ ಆದಿಯಲ್ಲಿ ಮರುಹುಟ್ಟು ಪಡೆದ ಕನ್ನಡ ಬರಹ ಲೋಕ, ಇಂದು ಭಾರತೀಯ ಸಾಹಿತ್ಯರಂಗದಲ್ಲಿ ವಿಶಿಷ್ಟ ಸ್ಥಾನವನ್ನು ಅಲಂಕರಿಸಿದೆ. ನಿಜಕ್ಕೂ ಜಾನಪದವು, ಅದರಲ್ಲೂ ವಿಶೇಷವಾಗಿ ಸಾಹಿತ್ಯ ಕಲೆಯು ಕನ್ನಡ ಲೋಕದ ಶಕ್ತಿಯೇ.

       ಈಗ, ಮರಳಿ ಮೊದಲ ಜಿಜ್ಞಾಸೆಯತ್ತ ಬರೋಣ. ಕನ್ನಡವ ಉಳಿಸಿ, ಬೆಳೆಸುವುದು ಹೇಗೆ? ಈ ಯುಗದಲ್ಲಿ, ಒಂದು ನುಡಿಯು ನಿಶ್ಚಿಂತೆಯಿಂದ ನಡೆಯಿಡಬೇಕಾದಲ್ಲಿ, ಸಮಕಾಲೀನ ಅರಿಮೆ, ಚಳಕ, ವ್ಯವಹಾರ ತಂತ್ರಗಳ ಸೃಷ್ಟಿ, ಅದರಲ್ಲೂ ಮುಖ್ಯವಾಗಿ ಹಣ, ಹೆಸರು ಗಳಿಸುವ ದಾರಿಗಳ ಸೃಷ್ಟಿ, ಆ ನುಡಿಯಲ್ಲೇ ಆಗಬೇಕ್ಕಾದ್ದು ಅಗತ್ಯ. ಈ ಅನುಕೂಲ ನಮ್ಮ ಕನ್ನಡ ನುಡಿಗೆ ಒದಗಿಬಂದಿಲ್ಲ. ಒದಗಿಸಿಕೊಳ್ಳಲಿಲ್ಲ. ಇನ್ನು, ನಾವೆಂದೂ ಆಂಗ್ಲರು, ಸ್ಪಾನಿಶರ ಹಾಗೆ ರಾಷ್ಟ್ರಪ್ರಭುತ್ವವನ್ನು ಜಗತ್ತಿನಾದ್ಯಂತ ವಿಸ್ತರಿಸಿದವರೂ ಅಲ್ಲ. ಇದರಿಂದಾಗಿ, ಕನ್ನಡದ ಸಾಕ್ಷಿಪ್ರಜ್ಞೆ ಸಂಕುಚಿತ ಭೌಗೋಳಿಕ ಪರಿಧಿಯಲ್ಲಿ ಶಿಥಿಲರೂಪದಲ್ಲಿ ಬಂಧಿತವಾಗಿದೆ. ಕನ್ನಡದ ಸ್ಪಂದನೆಯ ವಿಸ್ತಾರ ಹಾಗೂ ಆಳ್ವಿಕೆಯ ಆಳ, ಬಹಳ ಸೀಮಿತವಾದುದು. ನಮ್ಮ ಶಕ್ತಿ ಒಂದೇ. ಅದುವೇ, ಜಾನಪದ. ಇದನ್ನು ಉಳಿಸುವ ಕೆಲಸವನ್ನಷ್ಟೇ ಸದ್ಯದ ತುರ್ತಿನಿಂದ ನಾವು ಮಾಡಬೇಕಾದುದು. ಶಶಿ ಹೇಳಿದ ಹಾಗೆ,"ಕನ್ನಡಿಗನ ಸಂಪಾದನೆ, ಆರ್ಥಿಕಪ್ರಗತಿವಲಯದಿಂದಾಚೆಗಾದರೂ, ಅವನು/ಅವಳು ಕನ್ನಡವನ್ನು ಆದಷ್ಟು ಕೇಳುವ, ಆಡುವ, ಬಳಸುವ ಪರಿಸ್ಥಿತಿಯನ್ನು ನಿರ್ಮಿಸುವುದಷ್ಟೇ ನಮ್ಮಿಂದ ಮಾಡಬಹುದಾಗಿರುವ ಕನ್ನಡ ಸೇವೆ. ಇದರಿಂದಾಚೆಗೆ, ನಾವು ಏನೇ ಮಾಡಹೊರಟರೂ, ಅದು ಕೆಂಡವಿಲ್ಲದೆಡೆಗೆ ತುಪ್ಪ ಸುರಿದಂತೆ. ಬೆಂಕಿಯ ಒಂದಿನಿತು ಕಿಡಿಯೂ ಮೂಡದು." ಇದು ನನಗೂ ಸರಿಯೆನಿಸುತ್ತಿದೆ. ನನ್ನ ಅಂತರ್ಯದಲ್ಲಿ ಈ ಬೇಲಿಯು ಮುಳ್ಳುತಂತಿಯಂತೆ ಚುಚ್ಚುತ್ತಿದ್ದರೂ, ವಾಸ್ತವದ ತಳವು ನನ್ನನ್ನು ನಿಸ್ತೇಜನನ್ನಾಗಿಸಿದೆ.
  

       ಇನ್ನು ನೂರು ವರುಷಗಳಲ್ಲಿ ಕನ್ನಡವು ಭೂಪಟಲದಿಂದ ನಶಿಸಿದರೂ, ಅದರಿಂದ, ಈಗಿನ ಆರ್ಥಿಕ ನಿಲುವು, ಹಿಡಿತ, ನಿಲುಕುಗಳಲ್ಲಿ ಯಾರಿಗೂ, ಯಾವರೀತಿಯೂ ಆರ್ಥಿಕ, ವ್ಯಾವಹಾರಿಕ ನಷ್ಟವಾಗಲಾರದು. ಅಲ್ಲವೇ?

ಅಮರ್ ಕಾರಂತ ಹೊಳೆಗದ್ದೆ