ಹೆಚ್ಚು ಕಡಿಮೆ ದಿನದ ೨೪ ಗಂಟೆಯೂ ವಿದ್ಯುತ್ ಪೂರೈಕೆ ಇರುವ ನಮ್ಮ ಬೆಂಗಳೂರಿನಲ್ಲಿ, ಅಪರೂಪಕ್ಕೊಮ್ಮೆ ಕೆಲ ನಿಮಿಷಗಳ ಕಾಲ, ಅದೂ
ರಾತ್ರಿಯ ವೇಳೆಯಲ್ಲಿ, ಪೂರೈಕೆ ಸ್ಥಗಿತಗೊಂಡ ಕ್ಷಣಗಳು ಅಪೂರ್ವ. ಅದೇ
ದಿನ ಮನೆಯ ಇನ್ವರ್ಟರ್ ಕೆಟ್ಟು ಹೋಗಿದ್ದರೆ, ಆ ದಿನ ಸುದಿನ! ನೂರಾರು ಲೆಕ್ಕಾಚಾರಗಳಲ್ಲಿ,
ಗೊಂದಲಗಳಲ್ಲಿ, ಕರ್ತವ್ಯಗಳು ಎಂಬ ಭ್ರಮೆಯಲ್ಲಿ
ಮೂಡುತ್ತಿರುವ ಕಾರ್ಯಗಳಲ್ಲಿ ಮುಳುಗಿರುವ ನಮ್ಮ ಮನಸ್ಸಿಗೆ, ಆ ಕಿರು
ಕತ್ತಲ ಜಗತ್ತು ಕ್ಷಣಿಕ ಧಿಗ್ಭ್ರಮೆ ಹುಟ್ಟಿಸುತ್ತದೆ. "ಕರೆಂಟ್ ಇಲ್ಲದೆ ಏನಪ್ಪ ಮಾಡುವುದು
ಇವಾಗ?" ಎಂದು ಹಲುಬುತ್ತ ನಮ್ಮ ಮನೆನೆತ್ತಿಗೆ ಹೋಗಿ ಕೂತರೆ,
ನಿಜಕ್ಕೂ ಆ ದಿನದ ವಿದ್ಯುತ್ ಅಭಾವ ಸಾರ್ಥಕತೆ ಹೊಂದಿದಂತೆಯೆ! ಸುತ್ತಲಿನ
ಕತ್ತಲಲ್ಲಿ ಎಲ್ಲಿಂದಲೋ ಮೋಡುತ್ತಿರುವ ಮೋಟಾರಿನ ಸದ್ದು, ಪೀ ಪೀ
ಹಾರ್ನು, ಯಾರೋ ಮೊಬೈಲಿನಲ್ಲಿ ಅರಚುತ್ತಿರುವ ವೈಯಕ್ತಿಕ ಗುಪ್ತ
ವಿಚಾರಗಳು, ಬೇಕರಿಯ ಎದುರು ಪಾನಮತ್ತ, ಧೂಮಚಿತ್ತ
ನಶೆಯಲ್ಲಿ ನಡೆಯುತ್ತಿರುವ ರಾಜಕೀಯ, ಸಾಂವಿಧಾನಿಕ ಚರ್ಚೆಗಳು. "ಈ
ರಗಳೆಗಳೆಲ್ಲ ದಿನಾ ಇದ್ದಿದ್ದೇ" ಎಂದು ಕತ್ತೆತ್ತಿ ನೋಡಿದರೆ, ಮೊಡಕವಿದ
ವಾತಾವರಣ ಇಲ್ಲದಿದ್ದರೆ, ನಾವೂ ನಿಮ್ಮ ಜಗತ್ತಿನ ಆನುಷಂಗಿಕ
ವ್ಯಕ್ತಿತ್ವಗಳು ಎಂದು ಮಿಂಚಿ ಸೆಳೆಯುವ ನೂರಾರು ನಕ್ಷತ್ರಗಳು, ಶನಿವರೆಗಿನ
ಗ್ರಹಗಳು, ತದೇಕಚಕ್ಷುವಿನಿಂದ ಗುರಾಯಿಸಿದರೆ ಕಾಣುವ ಆಂಡ್ರೊಮೇಡ
ನಕ್ಷತ್ರಪುಂಜ, ನಮ್ಮದೇ ಮಿಲ್ಕಿವೇ ಆಕಾಶಗಂಗೆ, ಇವೆಲ್ಲದರ ಹಿಂದಿನ ಬಿಲಿಯಾಂತರ ವರುಷಗಳ ರೋಚಕ ಇತಿಹಾಸ; ಎಲ್ಲವೂ
ಸಂಕುಚಿತ ಸ್ಮೃತಿಪಟಲದಲ್ಲಿ ಕ್ಷಣದಲ್ಲಿ ಹಾದು ಹೋಗುತ್ತವೆ. ಈ ಅನುಭವವು ವರ್ಣಿಸಲಸದಳ.
ಈ
"ಗ್ಯಾಪಿ"ನಲ್ಲಿ ಕೆಲವು ಪ್ರಶ್ನೆಗಳು ಏಳುತ್ತವೆ. ಕೋಟ್ಯಾಂತರ ಜ್ಯೋತಿರ್ವರ್ಷಗಳ
ವ್ಯಾಪ್ತಿ, ಬಿಲಿಯಾಂತರ ವರ್ಷಗಳ ಸ್ಥಿತಿ,ಲಯಗಳಿರುವ
ಈ ಬ್ರಹ್ಮಾಂಡದಲ್ಲಿ, ನಗಣ್ಯವೆಂಬಂತಿರುವ ಸೌರಮಂಡಲದ, ಅತಿಪುಟ್ಟ ಗ್ರಹಗಳಲ್ಲೊಂದಾದ ಭೂಮಿಯಲ್ಲಿ ನಮ್ಮೆಲ್ಲರ ಜನನವಾಗಿದೆ. ಇಂತಹಾ ಅಗಾಧ
ವ್ಯಾಪ್ತಿ, ಇತಿಹಾಸಗಳ ಗೋಲದಲ್ಲಿ ನಮ್ಮ ದಿನನಿತ್ಯದ ಬದುಕೇ ಈ ಗೋಲದ
ಕೇಂದ್ರಬಿಂದುವಿನಂತೆ ನಾವು ಬದುಕುತ್ತಿದ್ದೇವಲ್ಲಾ! ಇವೆಕ್ಕೆಲ್ಲಾ ಒಂದು ನಿರ್ದಿಷ್ಟ
ಅರ್ಥವಿದೆಯೇ? ನಾವು ಬದುಕಿನಲ್ಲಿ ಇದಮಿತ್ತಂ ಎನ್ನುವಂತಹ ಸ್ಪಷ್ಟ ಗುರಿ
ಹೊಂದಬೇಕೆ? ಕ್ವಚಿತ್ತಾದ ತತ್ವಗಳನ್ನು ನಂಬಿ ಅವುಗಳ ನೆರಳಿನಲ್ಲೇ ನಮ್ಮ
ಜೀವನ ಸಾಗಿಸಬೇಕೆ? ಇವುಗಳೆಲ್ಲದರ ಸಮ್ಮಿಳಿತದಿಂದ ಹುಟ್ಟುವ ಸಾರ್ಥಕತೆಯ
ಸೋಗಿಗೆ ನಮ್ಮ ಜೀವ ಹಪಹಪಿಸಬೇಕೆ?
ಈ ಎಲ್ಲಾ ತರಲೆ
ಪ್ರಶ್ನೆಗಳಿಗೆ ಧನಾತ್ಮಕ ಉತ್ತರಗಳನ್ನು ನೀಡುವ ಜನರೇ ನಮ್ಮ ಜಗತ್ತಿನ "ಸಾಧಕ"ರಲ್ಲಿ
ಅಗ್ರಗಣ್ಯರು! "ಮರುಜನ್ಮ ಇದೆಯೋ ಇಲ್ಲವೋ ತಿಳಿದಿಲ್ಲ. ಮನುಷ್ಯನಾಗಿ ಹುಟ್ಟಿದ್ದೇನೆ.
ಏನಾದರೊಂದು ಸಾಧಿಸಿ, ಬದುಕು ಸಾರ್ಥಕಗೊಳಿಸಿಕೊಳ್ಳಬೇಕು" ಎಂದು
ಒಳದನಿಯಲ್ಲಿ ಅರಹುವವರಲ್ಲಿ ಹೆಚ್ಚಿನವರು "ಸಾಧಕ"ರಾಗಿ ಕುಲಾಂತರಗೊಂಡು, ಜನರ ದೃಷ್ಟಿಯಲ್ಲಿ ಮೇಲ್ವರ್ಗದ "ಜಾತಿ"ಗೆ ಸೇರುತ್ತಾರೆ! ತಮ್ಮ ಜೀವನಾನುಭವ,
ಒಲುಮೆ, ಆಸಕ್ತಿ, ವ್ಯಕ್ತಿತ್ವಗಳ
ಸಮ್ಮಿಲನದಿಂದ ಒಂದು ನಿರ್ದಿಷ್ಟ ಗುರಿಯನ್ನು ಸ್ಥಾಪಿಸಿ, ಅಲ್ಲಿಗೆ ತಲುಪಲು ಸ್ಪಷ್ಟ ಮಾರ್ಗಸೂಚಿಗಳನ್ನು ಹಾಳೆಯಲ್ಲಿ ಕೊರೆದು,
ಜೀವನದ ಯಾವ ತಿರುವಿನಲ್ಲೂ ಗುರಿಯು ಸಂಚಲನಗೊಳ್ಳದಂತೆ ಖಾತರಿವಹಿಸುತ್ತಾರೆ.
ಅನೂಹ್ಯ ಅನುಭವಗಳಿಂದಲೋ, ಸೂಚ್ಯ ಪ್ರಯೋಗಳಿಂದಲೋ ಕೆಲವು ತತ್ವಗಳನ್ನು
ನಂಬಿ, ಅವುಗಳು ತೋರುವ ದಿಕ್ಸೂಚಿಯಲ್ಲಿಯೇ ಪಯಣ ಸಾಗಿಸುತ್ತಾರೆ. ಇದು, ಕಷ್ಟದ ಮಾರ್ಗವೇ ಸೈ! ಕಣ್ಣುಮುಚ್ಚುವ ಮೊದಲು ಆಂತರಿಕ ತೃಪ್ತಿ, ಮುಚ್ಚಿದನಂತರ ಲೋಕದ ಹೊಗಳಿಕೆ (ಕೇಳಲು ಕಿವಿಗಳು ಆಗ ಮಣ್ಣಾಗಿದ್ದರೂ!) ಪ್ರಯಾಸದಿಂದಲೇ
ದೊರಕುತ್ತದೆ.
ಆದರೆ, ಈ
ಮಾರ್ಗವನ್ನನುಸರಿಸುವ ಜನರು ಜಗತ್ತಿನ ಜನಸಂಖ್ಯೆಯ ಶೇಕಡ ೧ರಷ್ಟು ಮಾತ್ರ. ಹಾಗಾದರೆ, ಇನ್ನುಳಿದ
೯೯ ಪ್ರತಿಶತ ಜನರು? ಜಗತ್ತಿನ ಲಿಖಿತ, ಮೌಕಿಕ, ಸ್ಮರಿಪ ಇತಿಹಾಸದಲ್ಲಿ ಅನಾಮಧೇಯರಾಗೇ ಉಳಿಯುವವರು
ಇವರು. ಲೋಕದ ದೃಷ್ಟಿಯಲ್ಲಿ "ಸಾಧನಾ"ಶೂನ್ಯರು. ನಿರರ್ಥಕ ಬದುಕ ಬದುಕಿದವರು. ಹೌದೇ?
ಹೌದಾದರೆ, ಲೋಕದ ಎಷ್ಟೋ ತಾಯಂದಿರು, ಗುರುಗಳು, ಸ್ನೇಹಿತರು ಮನುಷ್ಯ ಸಮಾಜದ ಆಂತರಿಕ ವ್ಯವಸ್ಥೆಯ
ಶಕ್ತಿಕೇಂದ್ರಗಳಾಗಿದ್ದರೂ, ಅವರು ಐತಿಹಾಸಿಕವಾಗಿ, ಲೋಕದ ಸ್ಮೃತಿಯಲ್ಲಿ
"ಸಾಧನಾ"ಶೂನ್ಯರೇ! ದಿನಬೆಳಗಾದರೆ ಹಕ್ಕಿಗಳಿರುವಲ್ಲಿ ನಡೆದು, ಆಲಿಸಿ, ಮುದಗೊಳ್ಳುವ
ನಾಲಾಯಕರು; ಜೀವನಪರ್ಯಂತ ಸೋಜಿಗದಲ್ಲೇ ಅನ್ವೇಷಣೆಕೈಗೊಂಡ "ಬಿರುದು"ಶೂನ್ಯ ಸಹಸ್ರ
"ವೇಸ್ಟ್" ವಿಜ್ಞಾನಿಗಳು; ಮೈಕೈ ಕೆಸರುಮೆತ್ತಿಕೊಂಡು ಗದ್ದೆ ಊಳುವುದರಲ್ಲೇ ಬದುಕಿನ
"ಸಾರ್ಥಕತೆ" ಕಂಡುಕೊಳ್ಳುವ ಲಕ್ಷಾಂತರ ಕ್ಷುದ್ರ ರೈತರು; ಇವರೆಲ್ಲರೂ ಕಡಲಿನ ಅಗಣಿತ
ಮರಳುಮಣಿಗಳೇ!
ಇಷ್ಟೆಲ್ಲಾ ಹರಟಿದ್ದಕ್ಕೆ ಒಂದು ಕಾರಣವಿದೆ.
ಮಾನವರೆಂದಮೇಲೆ ನಮಗೆ ಇಂತಹ ಸೈದ್ಧಾಂತಿಕ ಮಂಥನಗಳು ಸಾಮಾನ್ಯವೇ. ಕೆಲವರಲ್ಲಿ ನಿರ್ಥಕವೂ, ಸ್ಥೂಲವೂ ಆಗಿರುತ್ತವೆ. ಇನ್ನುಳಿದವರಲ್ಲಿ ಈ ಸಮಸ್ಯೆಗಳೆಲ್ಲಾ ಗಹನವಾಗಿ ಯೋಚನಾರ್ಹ, ತಕ್ಕಂತೆ
ಯೋಜನಾರ್ಹವಾಗಿ ಕಂಡುಬರುತ್ತದೆ. ಇವೇನೇಇದ್ದರೂ, ಈ ತಾತ್ವಿಕ ತಿಕ್ಕಾಟಗಳಲ್ಲಿ ಸಮಾಧಾನಕರ ನೆಲೆ ಕಂಡುಕೊಳ್ಳುವುದು ಅತ್ಯವಶ್ಯಕವೆಂದೇ ನನ್ನ
ಅಭಿಮತ. ನಿರ್ದಿಷ್ಟ ಗುರಿ,ತತ್ವ ಹೊಂದಿದ,
ಅವುಗಳ ಫಲವತ್ತತೆಗಾಗಿ ದುಡಿಯುವ "ಸಾಧಕ"
ಪಂಗಡ ಒಂದೆಡೆ. ಇವ್ಯಾವುದರ ಪರಿವೇ ಇಲ್ಲದೆ, ಇದ್ದರೂ ಹಲವು ಶಕ್ತವೋ, ನಿಶ್ಯಕ್ತವೋ ಕಾರಣಗಳಿಂದ ಈ ನಿರ್ದಿಷ್ಟತೆಗಳನ್ನು ಬದಿಗೊತ್ತಿ, ಅ-ಐತಿಹಾಸಿಕ, ಅತಿಸಾಮಾನ್ಯ,
ಆದರೂ ಅತಿಮುಖ್ಯದ ಜೀವನ ನೆಡೆಸುವವರ ವರ್ಗ ಇನ್ನೊಂದೆಡೆ. ಈ ಎರಡು ವರ್ಗಗಳ ಸಮನ್ವಯತೆ ನಮ್ಮ ಸಮಾಜದ ಸಾರ್ವಕಾಲಿಕ ಅವಶ್ಯಕತೆಯಾಗಿದೆ. ಆದರೆ, ಯಾವ ಮಾರ್ಗದಲ್ಲಿ ನೀವು ನಡೆಯ ಬಯಸುವಿರಿ ಎಂಬುದು ನಿಮಗೆ
ಬಿಟ್ಟದ್ದು. ನಿಮ್ಮ ಇರುವಿಕೆಯ ಸ್ಥಿತಿಗೆ, ಆಗುವಿಕೆಯ
ಬಯಕೆಗೆ ಬಿಟ್ಟದ್ದು.
ಮುಗಿಸುವ ಮುನ್ನ ಒಂದು
ಮಾತು. ಜೀವನದಲ್ಲಿ ಯಾವುದೇ ಅಚಲ ಗುರಿಯಿಲ್ಲದಿದ್ದರೂ, ಲೋಕದ ಅಂಕೆಯಲ್ಲಿ "ಸಾಧಕ"ರು ಎನಿಸಿಕೊಂಡವರು ಕೆಲವರಿದ್ದಾರೆ. ಈ ಕೆಲವರಲ್ಲಿ ಅತ್ಯುನ್ನತ ಉದಾಹರಣೆ ನಮ್ಮ ನಾಡಿನ ಕೆ.ಪಿ.ಪೂರ್ಣಚಂದ್ರ ತೇಜಸ್ವಿ. ಕೋವಿ ಹಿಡಿದು
ಸ್ವಚ್ಚಂದವಾಗಿ ಕಾಡು ಸುತ್ತುವುದನ್ನೇ ಪ್ರಾಯದ ಅಪ್ರತಿಮ ಆದರ್ಶವೆಂದು ತಿಳಿದಿದ್ದ ಅವರು,
ಆ ಸುತ್ತಾಟದ ಅನುಭವದಿಂದಲೇ ಕನ್ನಡ ಸಾಹಿತ್ಯಕ್ಕೆ ಹೊಸ ಭಾವವುಳ್ಳ, ಶೈಲಿಯುಳ್ಳ, ಅರ್ಥಗಳುಳ್ಳ ಕೃತಿಗಳನ್ನು ನೀಡಿದರು. ಅವರ ಸುತ್ತುವ, ಅರಿಯುವ, ಅಚ್ಚರಿಪಡುವ,
ಸಂಶೋಧಿಸುವ ವ್ಯಕ್ತಿತ್ವ ಹೇಗಿತ್ತೆಂದರೆ, ಅವರ ಕೃತಿಗಳನ್ನೂ
ಮೀರಿ ಅವರ ದೈನಂದಿನ ಚಟುವಟಿಕೆಗಳೇ ಅವರಿಗೆ ದೊಡ್ಡ ಅಭಿಮಾನಿವರ್ಗ ದೊರಕಿಸಿದವು.
ಅವರು ಕೂತದ್ದು, ನಿಂತದ್ದು, ಕುಡಿದದ್ದು, ತಿಂದದ್ದು ಎಲ್ಲವೂ ದಂತಕತೆಗಳಾದವು!
ಇವೆಲ್ಲಾ ಸ್ವತಃ ತೇಜಸ್ವಿಯವರಿಗೇ ಇಷ್ಟವಿರಲಿಲ್ಲ.
ಯಾವ
ಗುರಿ, ತತ್ವಗಳ ಹಿಂದೆ ಹೋಗದಿದ್ದರೂ, ಅವರ ಘನೀಕೃತ, ಸಹಜ ವ್ಯಕ್ತಿತ್ವದಿಂದಲೇ ಅಪ್ರಜ್ಞಾಪೂರ್ವಕವಾಗಿ ಹೆಸರು ಮಾಡಿದವರು. ನಿಮ್ಮ ವ್ಯಕ್ತಿತ್ವವೂ ಇಷ್ಟೇ ಘನವಾಗಿದ್ದಲ್ಲಿ,
ಬದುಕಲು, "ಸಾಧಿಸ"ಲು ಈ ಯಾವ ಸೈದ್ಧಾಂತಿಕ ಸಮಸ್ಯೆಗಳ ಗೋಜು ನಿಮಗೆ
ಬೇಕಾಗಿಲ್ಲ. ಅಲ್ಲವೇ?
ಅಮರ ಕಾರಂತ ಹೊಳೆಗದ್ದೆ
(೨೫ ವಯಸ್ಸಿನ ಇವ ಜೀವನದ ಎಳೆತ ಸೆಳೆತಗಳಿಗೆ ಸಿಕ್ಕಿ ಈಜಾಡಿ ಜಯಸಿದವ. ಒಂದು ಸಿಗರೇಟು, ಒಂದು ಪೆನ್ನು ಮತ್ತೆ ಒಂದು ಹಾಳೆ ಸಿಕ್ಕರೆ ಇವನಿಗೆ ಅಷ್ಟೇ ಹಿತ. )