Wednesday 2 September 2015

ನಿದ್ರಾದೇವಿಯ ಮೀರಿ!

"ಮುಂಗಾರು ಮಳೆಯೆ.. ಏನು ನಿನ್ನ ಹನಿಗಳ ಲೀಲೆ.." ಶನಿವಾರ ರಾತ್ರಿ ಸುಮಾರು ಗಂಟೆಯ ಸಮಯ, ತುಂತುರು ಮಳೆ ಬರ್ತಾ ಇತ್ತು. ಅದೇ ಮೂಡಲ್ಲಿ ಹಾಡ್ ಕೇಳ್ತಾ, ಬಹುಶಃ ನಾಳೆ 'ಹನೂರಿಗೆ' ಹೋಗುವ ಕಾರ್ಯಕ್ರಮ ರದ್ದಾಗಿದೆ ಎಂದು ಏನನ್ನೋ ಬ್ರೌಸ್ ಮಾಡುತ್ತಾ ಕುಳಿತಿದ್ದಾಗ ವಿನಯನ ಕರೆ ಬಂತು. "ಮಗ ನಾಳೆ ನಾವಿಬ್ರೆ ಹನೂರಿಗೆ ಹೋಗ್ ಬರೋಣ. ಕಾಂತು ಆದ್ರೆ ಅಲ್ಲೇ ಜಾಯ್ನ್ ಆಗ್ತೀನಿ ಅಂದಿದಾನೆ" ಅಂದ. "ಲೋ! ನಾವಿಬ್ರೆ ಹೋಗಿ ಏನೋ ಮಾಡೊದ್ ಅಲ್ಲಿ?" ಎಂದು ಕೇಳಿದೆ. "ಬೇರೆಯವ್ರ್ ಇದ್ದಿದ್ದ್ರೆ ಏನ್ ಮಾಡ್ತಿದ್ವೋ ಅದೇ ಮಾಡೋಣ!" ಎಂದ. ನನಗೂ ಸರಿ ಎನಿಸಿ ಬೆಳಿಗ್ಗೆ ಕ್ಕೆ ಕರೆ ಮಾಡಿ ಎಬ್ಬಿಸು ಎಂದು ಹೇಳಿ ಮಾತು ಮುಗಿಸಿದೆ.

ಬಸ್ಸು ಇದ್ದಿದ್ದು ಬೆಳಿಗ್ಗೆ ೬ಕ್ಕೆ ಸ್ಯಾಟಲೈಟ್ ಬಸ್ ನಿಲ್ದಾಣದಿಂದ; ಹಾಗಾಗಿ ಅಲ್ಲೆ ಪಕ್ಕದಲ್ಲಿದ್ದ ದರ್ಶನ್ ಮನೆಯಲ್ಲಿ ಉಳಿಯುವುದು ಲೇಸೆಂದು ಅಲ್ಲಿಗೆ ಹೊರಟೆ. ಮಳೆ ತನ್ನ ಕಣ್ಣಾ ಮುಚ್ಚಾಲೆ ಆಟ ನಿಲ್ಲಿಸಿರಲಿಲ್ಲ. ಮಳೆ ಬಂದಾಗ ಬೈಕ್ ಓಡಿಸುವುದೆಂದರೆ ನನಗೆ ಕೊಂಚ ದಿಗಿಲು! ಎಲ್ಲಿ ಸ್ಕಿಡ್ ಆಗಿ ದಬಾಕೊತಿನೊ ಅನ್ನೊ ಭಯ! ನಿಧಾನವಾಗಿ ಓಡಿಸಿ ಅವನ ಮನೆ ತಲುಪಿದೆ. ಅವರಮ್ಮ ಬಿಸಿಬಿಸಿ ಮುದ್ದೆ ಮತ್ತು ಸಾಂಬರ್ ಮಾಡಿದ್ರು. ಇವತ್ತು ಹೋಟೆಲು, ನಾಳೆ ಕ್ಯಾಂಟೀನು ಅಂತ ಊಟಕ್ಕೆ ಓಡಾಡುವ ಅಲೆಮಾರಿ ನಾನು. ಮುದ್ದೆ ನೋಡಿದ್ದು ಮಳೆಯಿಲ್ಲದ ನಾಡಿಗೆ ತುಂತುರು ಮಳೆ ಸುರಿದ ಹಾಗಾಯ್ತು! ಮುದ್ದೆ ತಿಂದು ಮಾಳಿಗೆಯಲ್ಲಿ ಅದು- ಇದು ಹರಟುತ್ತಾ ಕೂತವರಿಗೆ ಸಮಯ ಹೋಗಿದ್ದೆ ತಿಳಿಯಲಿಲ್ಲ. ಗಮನಿಸಿದಾಗ ಆಗಲೇ  .೩೦ ಆಗಿತ್ತು! ಅದನ್ನು ಬೆಳಗಿನ ಜಾವ ಎನ್ನಲೋ ಇಲ್ಲಾ ತಡರಾತ್ರಿ ಎನ್ನಲೋ ಇನ್ನೂ ಅರ್ಥ ಆಗಿಲ್ಲ! ಜೈ ಎಂದು .೩೦ ಕ್ಕೆ ಅಲಾರ್ಮ್ ಇಟ್ಟು ನಿದ್ರಾದೇವಿಯ ಪಾದಕ್ಕೆ ಶರಣಾದೆ.

ಬೆಳಿಗ್ಗೆ ಎದ್ದು ತಯಾರಾಗಿ ಸ್ಯಾಟಲೈಟ್ ಬಸ್ ನಿಲ್ದಾಣ ತಲುಪಿದ ಐದೇ ನಿಮಿಷಕ್ಕೆ ವಿನಯ ಬಂದ. ನಾಲ್ಕನೇ ನಂಬರ್ ಪ್ಲಾಟ್ ಫಾರ್ಮನಲ್ಲಿ ಹನೂರಿನೆಡೆಗೆ ಹೋಗುವ ಬಸ್ಸು ಇನ್ನೂ ಬಾರದ್ದರಿಂದ, "ಬಾರೊ, ಬಾದಾಮಿ ಹಾಲು ಕುಡಿದು ಹೊರಡೋಣ" ಎಂದೆ. ನಂದಿನಿ ಕೇಂದ್ರದಲ್ಲಿ ಬಿಸ್ಕತ್ತು ಬಾದಾಮಿ ಹಾಲನ್ನು ಸವಿದು ಮುಗಿಸುತ್ತಿದ್ದಂತೆ ಹನೂರಿಗೆ ಹೋಗುವ ಬಸ್ ಬಂದಿತು. ವಿನಯ ಬೇಗ ಬಸ್ ಹತ್ತಿ ಮುಂದಿನ ಸೀಟನ್ನು ಕಾದಿರಿಸಿದ. ನಾನು ಹೋಗಿ ಆಸೀನನಾದೆ! ನಿರ್ವಾಹಕ "ರೈಯ್ಯಾ ರೈಯ್ಯಾ.." ಎನ್ನುತ್ತಿದ್ದಂತೆ ಚಾಲಕ ಪಯಣ ಆರಂಭಿಸಿದ. ಮೊದಲೇ ಮೂರು ಬಾರಿ ಹನೂರಿಗೆ ಇದೇ ವೇಳೆಯ ಬಸ್ಸಿನಲ್ಲಿ ಹೋಗಿದ್ದರಿಂದ, ಹಿಂದಿನ ಬಾರಿಯ ಪ್ರಯಾಣದ ಬಗ್ಗೆ ವಿನಯ ಅನುಭವವನ್ನು ಹಂಚಿಕೊಳ್ಳುತ್ತಾ ಕೂತಿದ್ದ. ನನಗೋ, ಅವನಾಡುತ್ತಿದ್ದ ವಿಷಯದ ಬಗ್ಗೆ ಆಸಕ್ತಿ; ಆದರೆ ಹಿಂದಿನ ದಿನ ಮಲಗಿದ್ದೆ ಬರಿ ಎರಡು ಗಂಟೆ, ಒಳ್ಳೆ ಬಿಸಿ ತುಪ್ಪದ ಸ್ಥಿತಿ ಆಯಿತು. ಕಾಣದ ನಿದ್ದೆಗೆ ಹಂಬಲಿಸುತ್ತಿದ್ದ ನನ್ನ ಕಣ್ಣುಗಳನ್ನು ನೋಡಿ, "ನೀನ್ ಸ್ವಲ್ಪ ಹೊತ್ತು ಮಲ್ಕೊಳ್ಳೊ, ಅಲ್ಲಿ ಹೋಗಿ ಏನ್ ಮಾಡೋದು ಅಂತ ಎದ್ ಮೇಲೆ ಮಾತಾಡೋಣ" ಎಂದ. ಮಕ್ಕಳಿಗೆ ಬೇಕಿದ್ದದ್ದು ಗೋಳಿಬಜೆ - ಅಮ್ಮ ಮಾಡಿದ್ದು ಗೋಳಿಬಜೆ ಅಂದುಕೊಳ್ಳುತ್ತ ಮಲಗಿದೆ

ಬಸ್ಸು ಮದ್ದೂರು ತಲುಪಿದಾಗ, ವಿನಯ ತಿಂಡಿಗಾಗಿ ಎಬ್ಬಿಸಿದ. ಇಬ್ಬರೂ ದಕ್ಷಿಣ ಭಾರತದ ರಾಷ್ಟ್ರೀಯ ತಿಂಡಿಯಾದ ಇಡ್ಲಿ ವಡೆಯನ್ನು ತಿಂದು, ಮದ್ದೂರಿನಲ್ಲಿ ಮದ್ದೂರು ವಡೆ ತಿನ್ನದೇ ಇದ್ರೆ ಹೇಗೆ ಎನ್ನುತ್ತಾ ನಾಲ್ಕು ವಡೆಯನ್ನು ಕಟ್ಟಿಸಿಕೊಂಡು ಬಸ್ ಹತ್ತಿದೆವು. ಪಯಣ ಮುಂದುವರೆಯಿತು. ನಮ್ಮ ಡ್ರೈವರೊ, ಐದ್ ಐದು ನಿಮಿಷಕ್ಕೊಮ್ಮೆ ಎಂಬಂತೆ "ಪೊಂ ಪೊಂ.. ಪೊಂ ಪೊಂ.." ಎಂದು ಜೋರಾಗಿ ಮುಂದೆ ಹೋಗುತ್ತಿದ್ದ ಗಾಡಿಗಳಿಗೆ ಗದರಿಸುತ್ತಾ ಸಾಗುತ್ತಿದ್ದ. .೩೦ ಗೆ ಹೊರಟ ನಾವು ಸುಮಾರು ೧೦.೩೦ ಕ್ಕೆ ಹನೂರು ತಲುಪಿದೆವು.

ಹನೂರು ಬಸ್ ನಿಲ್ದಾಣದಲ್ಲಿ, ಮಾರ್ಗದರ್ಶಿ ಸಂಸ್ಥೆಯ ಮಹದೇವ ಪ್ರಸಾದ್ ಅವರು ನಮ್ಮನ್ನು ಬರಮಾಡಿಕೊಳ್ಳಲು ಕಾಯುತ್ತಾ ಕುಳಿತಿದ್ದರು. ಅವರೊಡನೆ ಅಲ್ಲೇ ಪಕ್ಕದಲ್ಲಿದ್ದ ಹೊಟೆಲ್ ನಲ್ಲಿ ಚಹಾ ಆರ್ಡರ್ ಮಾಡಿ ಕುಳಿತೆವು. ನಮಗೆ ನೀರು ತಂದು ಕೊಟ್ಟ ಪುಣ್ಯಾತ್ಮ, ಒಂದೇ ಬಾರಿ ಮೂರು ಲೋಟವನ್ನು ತರಬೇಕು ಎಂದು ತನ್ನ ಬೆರಳುಗಳನ್ನು ಲೋಟಗಳಲ್ಲಿ ಮುಳುಗಿಸಿ ತಂದ. "ಏನಯ್ಯ, ಕುಡಿಯೋ ನೀರಲ್ಲಿ ಬೆರಳು ಮುಳುಗಿಸಿ ತಂದಿದ್ಯಲ್ಲ?!" ಎಂದು ಪ್ರಸಾದ್ ಅವರು ಕೇಳಿದರೆ ಮಹಾಶಯ "ಹೇಗೆ ತಂದುಕೊಡಬೇಕು ಅಂತ ನಿಮ್ಮಿಂದ ನಾನು ಕಲಿಬೇಕಾಗಿಲ್ಲ" ಎಂದು ಗೊಣಗುತ್ತ ಚಹಾ ತರಲು ಹೋದ. ಪುಣ್ಯಕ್ಕೆ, ಚಹಾದಲ್ಲಿ ಬೆರಳು ಮುಳುಗಿಸದೆ ಸರಿಯಾಗೆಯೆ ತಂದ! ಹರಹರ ಎಂದು ಹೊರಬರುತ್ತಿದ್ದಂತೆ ನಾಗರಾಜ್ ಅವರು ಬಂದರು. ಇವರೂ ಕೂಡ ಮಾರ್ಗದರ್ಶಿ ಸಂಸ್ಥೆಯ ಉದ್ಯೋಗಿ. ಬಹಳ ಮೃದು ಸ್ವಭಾವದ ಸಜ್ಜನ. ಅವರ ಗಾಡಿಯಲ್ಲಿ ವಿನಯ ಕೂತ. ನಾನು ಪ್ರಸಾದ್ ಅವರ ಗಾಡಿಯಲ್ಲಿ ಕೂತೆ. ಪ್ರಸಾದರದ್ದು ಮಾಜಿ ಸಚಿವರಾದ ಸೋಮಣ್ಣನವರ ಅನುದಾನದಿಂದ ಬಂದ ಗಾಡಿ. ಮೊದಲ ಬಾರಿಗೆ ತ್ರಿಚಕ್ರದ ಹೋಂಡಾ ಆಕ್ಟಿವ (ಅಂಗವಿಕಲರಿಗೆ ನೀಡುವಂಥದ್ದು) ಮೇಲೆ ಕೂತ ಅನುಭವ. ಹೋಗಿ ರಾಜಣ್ಣ ಸರ್  ಮನೆ ತಲುಪಿದೆವು.

ಅಲ್ಲಿ ರಾಜಣ್ಣ ಸರ್  ಮಕ್ಕಳು ವಿನಯನನ್ನು ನೋಡುತ್ತಿದ್ದಂತೆ ಅವನೊಡನೆ ಆಡಲು ಆರಂಭಿಸಿದ್ದು ನೋಡಿಯೇ ತಿಳಿಯಿತು, ಹಿಂದಿನ ಬಾರಿ ಬಂದಾಗ ಇವನು ಮಾಡಿದ ಮೋಡಿಯ ಪರಿ! ಚಹಾ ಕುಡಿದೇ ಬಂದಿದ್ದೇವೆ ಎಂದರೂ, ರಾಜಣ್ಣ ಸರ್ ಪತ್ನಿ ಬೆಲ್ಲದಲ್ಲಿ ಮಾಡಿದ್ದ ಚಹಾ ಕೊಟ್ಟರು. ರಾಜಣ್ಣ ಸರ್ ದು ಮುಗುಳ್ನಗುವಿನೊಂದಿಗೆ ಅದಕ್ಕೊಂದು ಸಮಜಾಯಿಷಿ ಬೇರೆ! "ಕುಡಿರಿ ಕುಡಿರಿ.. ಫೀಲ್ಡ್ ವಿಸಿಟ್ ಗೆ ಶಕ್ತಿ ಬೇಕಲ್ವ" ಎಂದು. ಮಾರ್ಗದರ್ಶಿಯ ಇನ್ನೋರ್ವ ಉದ್ಯೋಗಿ, ಸೃಜನಶೀಲರಾದ ಕಿರಣ್ ಕೂಡ ನಮ್ಮ ಜೊತೆ ಚಹಾ ಹೀರುತ್ತ ರಾಜಣ್ಣನ ಮಗಳು ಪೂನಮ್ ಚೇಷ್ಟೆ ನೋಡುತ್ತಾ ಕೂತರು. ರಾಜಣ್ಣ ಸರ್ ಹನೂರಿನ ನೈರ್ಮಲ್ಯದ ಮುಖ್ಯ ಸಮಸ್ಯೆಗಳನ್ನು ವಿವರಿಸುತ್ತಾ ಹೋದರು. ನಾವು ಆಲಿಸುತ್ತಾ ಪಟ್ಟಿ ಮಾಡುತ್ತಾ ಕೂತೆವು

ಭೇಟಿಯ ಮುಖ್ಯ ಉದ್ದೇಶ, ಹನೂರಿನ ಬೇರೆ ಬೇರೆ ಮನೆಗಳಿಗೆ ಹೋಗಿ ನೈರ್ಮಲ್ಯದ ಬಗ್ಗೆ ಶೌಚಾಲಯದ ಬಗ್ಗೆ ಅವರ ಅರಿವು, ಅಭಿಪ್ರಾಯಗಳನ್ನು ಕಲೆಹಾಕಿ ಅದಕ್ಕೆ ತಕ್ಕನಾಗಿ ಅವಾರ್ನೆಸ್ಸ್ - ಅರಿವು ಮೂಡಿಸುವ ಕಾರ್ಯಕ್ರಮವನ್ನು ಯೋಜಿಸುವುದಾಗಿತ್ತು. ರಾಜಣ್ಣ ಸರ್; ಆರ್ಥಿಕವಾಗಿ ಬೇರೆ ಬೇರೆ ಸ್ಥರದಲ್ಲಿರುವ, ಶೈಕ್ಷಣಿಕವಾಗಿ  ಬೇರೆ ಬೇರೆ ಸ್ಥರದಲ್ಲಿರುವ ವಿಕಲಾಂಗರು ಹಾಗೂ ವಿಶಿಷ್ಟವಾದ ಮಾಂದ್ಯತೆ (ಸ್ಪೆಷಲ್ಲಿ ಚಾಲೆಂಜಡ್)  ಇರುವವರ ಮನೆಗಳಿಗೆ ಭೇಟಿ ನೀಡಿ ವಿವರ ಸಂಗ್ರಹಿಸಿದರೆ, ಸಮಸ್ಯೆಯನ್ನು ಕೂಲಂಕುಷವಾಗಿ ಗಮನಿಸಬಹುದು ಎಂದು ಸಲಹೆಯಿತ್ತರು. ಅವರ ಸಲಹೆಯಂತೆ ಪ್ರಸಾದ್ ಹಾಗೂ ನಾಗರಾಜ್ ಅವರು ಯಾವ ಯಾವ ಮನೆಗಳನ್ನು ಭೇಟಿ ಮಾಡುವುದು ಎಂದು ಪಟ್ಟಿ ಮಾಡಿದರು. ಪಟ್ಟಿಯಂತೆ ನಾವು ಹೊರಟೆವು.

ಫೀಲ್ಡ್ ವಿಸಿಟ್ ಭಾಗವಾಗಿ  ನಾವು ಮೊದಲು ಹೋಗಿದ್ದು .ಜೆ ಕಾಲೋನಿಗೆ. ಅಲ್ಲಿನ ಮನೆಗಳಲ್ಲಿ, ಏಕೆ ಶೌಚಾಲಯವಿಲ್ಲ? ಅದರ ಇರುವಿಕೆಯ ಪ್ರಾಮುಖ್ಯತೆಯ ಅರಿವು ಇದೆಯೇ? ಇತ್ಯಾದಿ ಪ್ರಶ್ನೆಗಳನ್ನು ಕೇಳುತ್ತ, ಅವರ ಉತ್ತರವನ್ನು ಬರೆದುಕೊಳ್ಳುತ್ತಾ ಹೋದೆ. ವಿನಯ ಫೋಟೋ, ವೀಡಿಯೊ ತೆಗೆಯುವುದು; ಅವರಿಗೆ ಪ್ರಶ್ನೆ ಕೇಳುವುದರಲ್ಲಿ ನಿರತನಾದ. ಪ್ರಸಾದ್, ಕಿರಣ್ ಹಾಗೂ ನಾಗರಾಜ್ ಅವರು ಕೂಡ ಪ್ರಶ್ನೆ ಕೇಳುವುದರಲ್ಲಿ, ಉತ್ತರ ಆಲಿಸುವುದರಲ್ಲಿ ತಲ್ಲೀನರಾದರು. ಕಾಲೋನಿಯವರು ಕೂಡ ಬಂದು ನಿಂತರು. ಶೌಚಾಲಯಕ್ಕಾಗಿ ಅವರು ತಾಲೂಕು ಪಂಚಾಯಿತಿಗೆ, ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಪತ್ರವನ್ನು ತಂದು ತೋರಿಸಿದರು. ಅಲ್ಲಿನ  ಪುಟ್ನಂಜಮ್ಮನಿಗೆ ಕಾಲು ಸ್ವಾಧೀನ ಕಳೆದುಕೊಂಡಿದೆ. ತಾಯಿಯೇ ಪ್ರತಿನಿತ್ಯ ಬಯಲಿನೆಡೆಗೆ ಕರೆದೊಯ್ಯಬೇಕಾದ ಸ್ಥಿತಿ. ನಾವು ಭೇಟಿ ನೀಡಿದ ಬಹಳಷ್ಟು ಮನೆಗಳಲ್ಲಿ ನಮಗೆ ಸಂವಾದಿಸಲು ಸಿಕ್ಕಿದ್ದು ಮನೆಯ ಮಹಿಳೆಯರೇ

ಶೌಚಾಲಯ ಬೇಕು ಎಂದು ಅವರಿಗೆ ಗೊತ್ತಿದ್ದರೂ, ಹಣವಿಲ್ಲದೆ, ಜಾಗವಿಲ್ಲದೆ ಶೌಚಾಲಯ ಕಟ್ಟಿಸಲಾಗುತ್ತಿಲ್ಲ ಎಂದರು. "ಎಷ್ಟು ದಿನಕ್ಕೊಮ್ಮೆ ನೀರು ಬರುತ್ತದೆ? ನೀರಿನ ಸಮಸ್ಯೆ ಇದೆಯೇ?" ಎಂಬಿತ್ಯಾದಿ ಪ್ರಶ್ನೆ ಕೇಳುತ್ತ ಹೋದೆವು.ಸುಮಾರು ಮನೆಗಳ ಭೇಟಿ ಮುಗಿದಾಗ ಕಾಂತು ಬಂದ! ನಮಗೆ ಹೊಳೆಯದ, ನಾವು ಯೋಚಿಸದ ಹಲವು ಪ್ರಶ್ನೆಗಳು ಅವನ ಬತ್ತಳಿಕೆಯಲ್ಲಿದ್ದವು. "ಬನ್ನಿ, ಊಟ ಮಾಡಿ ಆಮೇಲೆ ಮುಂದುವರಿಸೋಣ" ಎಂದು ನಾಗರಾಜ್ ಅವರು ಹೇಳಿದರು. ನಮಗೂ ಹೊಟ್ಟೆ ಹಸಿದಿತ್ತು. ಅಲ್ಲೇ ಒಂದು ಹೋಟೆಲ್ನಲ್ಲಿ ಊಟ ಮಾಡಿ ಮತ್ತೆ ಭೇಟಿ ಮುಂದುವರೆಸಿದೆವು. ಸುಮರು ಹದಿನೈದು ಮನೆಗಳ ಭೇಟಿ ಮಾಡಿ, ಅವಾರ್ನೆಸ್ಸ್ ಕಾರ್ಯಕ್ರಮಕ್ಕೆ ಬೇಕಾದ ಮಾಹಿತಿಗಳೆಲ್ಲ ಸಿಕ್ಕವು ಎಂದು ದೃಢ ಪಟ್ಟ ಮೇಲೆ, ಇಷ್ಟು ಸಾಕು; ರಾಜಣ್ಣ ಸರ್ ಮನೆಗೆ ಹೋಗೋಣ ಎಂದು ನಡೆಯತೊಡಗಿದೆವು.

ರಾಜಣ್ಣ ಸರ್ ಮನೆಯಲ್ಲಿ ಎಲ್ಲರೂ ಕೂತು, ಸಂಗ್ರಹಿಸಿದ ಅಂಶಗಳ ಬಗ್ಗೆ ಚರ್ಚಿಸಿ ಮುಂದಿನ ಹೆಜ್ಜೆಯ ಬಗ್ಗೆ ಮಾತನಾಡುತ್ತಿದ್ದಂತೆ ಅವರ ಪತ್ನಿ ಮತ್ತೆ ಚಹಾದೊಂದಿಗೆ ಪ್ರತ್ಯಕ್ಷರಾದರು! ಮಾತುಕತೆ ಮುಗಿಯುತ್ತಿದ್ದಂತೆ ನಾಗರಾಜ್ ಅವರು "ನಮ್ಮ ಹನೂರ್ ಮಾದರಿ ಊರಾಗಿ ಮಾಡಬೇಕು ಅಂತಿದೀರ, ದೇವರು ನಿಮಗೆ ಹೆಚ್ಚಿನ ಶಕ್ತಿ ಕೊಡಲಿ" ಎಂದು ಹಾರೈಸಿ ಹೊರಟರು. ಪ್ರಸಾದ್ ಅವರು ಕೂಡ ನಮಗೆ ಶುಭ ವಿದಾಯ ಹೇಳಿ ನಾಗರಾಜ್ ಅವರನ್ನು ಹಿಂಬಾಲಿಸಿದರು. ನಾವು ಮೂವರು ಕೂಡ ಖಾಲಿ ಬಾಟಲಿಯಲ್ಲಿ ನೀರು ತುಂಬಿಸಿಕೊಂಡು ಹೊರಡಲು ಸನ್ನದ್ಧರಾದೆವು. ಕಿರಣ್ ಅವರು ಕೂಡ ನಮ್ಮೊಡನೆ ಹೊರಟರು.

ತಮ್ಮ ಕಾರಿನಲ್ಲಿ, ರಾಜಣ್ಣ ಸರ್  ನಮ್ಮನ್ನು ಬಸ್ ನಿಲ್ದಾಣದ ತನಕ ಬೀಳ್ಕೊಟ್ಟರು. ಕಾರು ನಮ್ಮ ನೋಟದಿಂದ ಮರೆಯಾಗುವವರೆಗೂ, ಪೂನಮ್ ಮತ್ತು ಭಾನು ನಮ್ಮೆಡೆಗೆ ಕೈ ಬಿಸಿ "ಟಾಟಾ.. ಬೈಬೈ" ಹೇಳುತ್ತಲಿದ್ದರು. ನಾವೂ ಅವರೆಡೆಗೆ ಕೈ ಬೀಸುತ್ತಾ ನಿಂತೆವು. ಹಾಗೆಯೆ ಸ್ವಲ್ಪ ಹೊತ್ತಿನಲ್ಲಿ ಕೊಳ್ಳೆಗಾಲದ ಕಡೆ ಹೋಗುವ ಬಸ್ಸು ಬಂದಿತು. ದರ್ಶನ ಅಭಿನಯದ ಕಲಾಸಿಪಾಳ್ಯ ಚಿತ್ರ ಬೇರೆ ಹಾಕಿದ್ರು ಬಸ್ಸಲ್ಲಿ. ಅಲ್ಲಿ "ಸುಂಟರಗಾಳಿ ಸುಂಟರಗಾಳಿ" ಅಂತ ಹಾಡು ಬರ್ತಾ ಇದ್ರೆ, ಬಸ್ಸಲ್ಲಿ ಒಳ್ಳೆ ತಂಗಾಳಿ ಬೀಸ್ತಾ ಇತ್ತು. ನಮ್ ಬಸ್ಸಿನ ನಿರ್ವಾಹಕ "ಕೊಳ್ಳೆಗಾಲದಲ್ಲಿ ನಮ್ದೆ ಬಸ್ಸಿದೆ. ಅವ್ರಿಗ್ ನಿಲ್ಸಕ್ ಹೇಳಿದೀನಿ, ಅದರಲ್ಲೇ ಹೋಗಿ" ಅಂದ. ಸರಿ ಅಂದ್ಕೊಂಡು ಕೊಳ್ಳೆಗಾಲದಲ್ಲಿ ಬಸ್ಸಿಂದ ಇಳ್ಕೊಂಡು ಓಡಿ ಹೋಗಿ ಬಸ್ ಹತ್ತಿದ್ವಿ. ಹತ್ತಿದ ಮೇಲೆ ಗೊತ್ತಾಗಿದ್ದು; ಸೀಟ್ ಇಲ್ಲ ಅಂತ! ನಾನು, ಕಾಂತು ಬಸ್ ಇಂಜಿನ್ ಇರತ್ತಲ್ವಾ ಅದರ್ ಮೇಲೆ ಕೂತ್ವಿ. ಪುಣ್ಯಕ್ಕೆ ಅದಕ್ಕೆ ಕುಶನ್ ಹಾಕ್ಸಿದ್ರು! ವಿನಯ ಫುಟ್ ಬೋರ್ಡ್ ಪಕ್ಕ ಕೂತ

ಬಸ್ಸು ಕೊಳ್ಳೆಗಾಲ ಟು ಬೆಂಗಳೂರು ತಡೆರಹಿತ! ಕಾಂತು ಕಿವಿಯುಲಿ ಹಾಕ್ಕೊಂಡು ಹಾಡು ಕೇಳ್ತಾ ಕೂತ. ನಾನು ವಾಟ್ಸ್ ಆಪ್ಪ್, ಫೆಸ್ಬೂಕ್ ಅಲ್ಲಿ ಸಮಯ ಕೊಲ್ಲ ಹತ್ತಿದೆ. ಒಳ್ಳೆ ಮಳೆ ಬೇರೆ ಬರೋದಕ್ ಶುರು ಆಯಿತು. ಸೀಟ್ ಸಿಕ್ಕಿದವ್ರ್ ಎಲ್ಲ ಗಡದ್ ಆಗಿ ನಿದ್ದೆ ಮಾಡ್ತಾ ಇದ್ರು. ಮೊಬೈಲ್ನಲ್ಲಿ ಉಳಿದವರು ಕಂಡಂತೆ ಚಿತ್ರದ "ಗಾಟಿಯ ಇಳಿದು" ಹಾಡು ಗುನುಗ್ತಾ ಇತ್ತು. "ಸಮಯ ಸಾಗೊ ಗತಿಯ ತಡೆಯುವ ಪರಿಯ ನಾ ಕಾಣೆನು.." ಅಂತ ಬಂದಾಗ ನನಗಂತೂ ಸಮಯ ಬೇಗ ಸಾಗಿ ಬೆಂಗಳೂರು ಬೇಗ ತಲುಪಿದರೆ ಸಾಕಪ್ಪ! ಇಲ್ಲಾ ಅಂದ್ರೆ ಎರಡ್ ಇದ್ದಿದ್ ನಾಲಕ್ ಆಗ್ ಹೋಗತ್ತೆ ಅನ್ನೋ ಭಯ ಕಾಡ್ತಾ ಇತ್ತು! ಅಂತೂ ಇಂತೂ ಬೆಂಗಳೂರು ತಲುಪಿದ್ವಿ. ವಿನಯ ಆರ್.ವಿ ಕಾಲೇಜ್ ಹತ್ರ ಇಳ್ಕೊಂಡ್ರೆ ನಾನು ಕಾಂತು ಸ್ಯಾಟ್ ಲೈಟ್ ಬಸ್ ನಿಲ್ದಾಣದಲ್ಲಿ ಇಳ್ಕೊಂಡ್ವಿ.

ನಾನು, ಕಾಂತು ಇಬ್ಬರೂ ಕಾಫಿ ಪ್ರಿಯರು; ಅದರಲ್ಲೂ ಸ್ಟ್ರಾಂಗ್ ಫಿಲ್ಟರ್ ಕಾಫಿ ಸಿಕ್ಕಿತೆಂದರೆ ಸ್ವರ್ಗಕ್ಕೆ ಮೂರೇ ಗೇಣು! ಬೆಳಿಗ್ಗೆ ವಿನಯನ ಜೊತೆ ಬಾದಾಮಿ ಹಾಲು ಕುಡಿದ ನಂದಿನಿ ಕೇಂದ್ರದಲ್ಲೇ ಎರಡು ಕಾಫಿ, ನಾಲ್ಕು ಬಿಸ್ಕತ್ತು ತಗೊಂಡು ಕೂತ್ವಿ. ಅವ್ನೂ ಕೂಡಾ ಹಿಂದಿನ ದಿನ ಬರಿ ಎರಡ್ ಗಂಟೆ ಮಲಗಿದ್ದ. ಬಾಡಿ ಪಾರ್ಟ್ಸ್ ಎಲ್ಲ ನೋಯ್ತಾ ಇತ್ತು. ನಿದ್ರಾದೇವಿ ಕೈ ಬೀಸಿ ಕರಿತಾ ಇದ್ಲು! ಕಾಫಿ ಹೀರ್ತಾ ಹೇಳ್ದೆ.. "ಮಗ.. ಲೈಫ್ ಟೈಮ್ ಎಕ್ಸಪಿರಿಯೆನ್ಸ್ ಲೋ" ಎಂದು. ಇಬ್ಬರೂ ಮುಗುಳ್ನಗುವನ್ನು ವಿನಿಮಯ ಮಾಡಿಕೊಂಡು, ನೆನಪಿನ ಹೊತ್ತಿಗೆಗೆ ಇನ್ನೊಂದು ಪುಟ ಸೇರ್ಪಡೆಯಾಯಿತು ಎಂದು ಯೋಚಿಸುತ್ತಾ, ಉಳಿದರ್ಧ ಕಾಫಿಯ ಹೀರುತ್ತ ಕೂತೆವು.


PS: ಹನೂರಿನ ಅನುಭವ ಏಕೆ "ಲೈಫ್ ಟೈಮ್ ಎಕ್ಸ್ಪಿರಿಯನ್ಸ್" ಎಂದು ಮುಂದಿನ ಭಾಗದಲ್ಲಿ ಬರೆಯುತ್ತೇನೆ.

ನರೇಶ